ದಾವಣಗೆರೆ- ಬಂದ್ ಗೆ ವ್ಯಾಪಕ ಪ್ರತಿಕ್ರಿಯೆ

ದಾವಣಗೆರೆ; ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಇಂದು ಕರೆ ನೀಡಿರುವ ಭಾರತ್ ಬಂದ್ ಗೆ ದಾವಣಗೆರೆಯಲ್ಲಿ ವ್ಯಾಪಕ ಪ್ರತಿಕ್ರಿಯೆ ದೊರೆತಿದೆ. ಇಂದು ಬೆಳಗ್ಗೆಯೇ ಕಾಂಗ್ರೆಸ್ ಕಾರ್ಯಕರ್ತರು ನಗರದ ಪ್ರಮುಖ ಭಾಗಗಳಲ್ಲಿ ಬೈಕ್ ಱ್ಯಾಲಿ ನಡೆಸಿದರು. ಪ್ರಮುಖ ರಸ್ತೆಗಳಲ್ಲಿ ತೆರಳಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದರು. ಇನ್ನು ಕೆಲವೆಡೆ ಒತ್ತಾಯಪೂರ್ವಕವಾಗಿಯೂ ಬಂದ್ ಮಾಡಿಸಿದರು. ಪಿಬಿ ರಸ್ತೆಯ ಮಧ್ಯಭಾಗದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹನಡೆಯಿತು. ಅಲ್ಲದೆ ಅಜಾದ್ ನಗರದ ಅರಳಿ ಮರ ವೃತ್ತದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಟೈರ್ ಗಳಿಗೆ ಬೆಂಕಿ ಹಚ್ಚಲು ತೆರಳಿದಾಗ ಅಲ್ಲಿಯೂ ಸಹ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಇನ್ನು ನಗರದೆಲ್ಲೆಡೆ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೆಎಸ್ಆರ್ ಟಿಸಿ ಬಸ್ ಗಳು ಸಹ ರಸ್ತೆಗಿಳಿದಿಲ್ಲ. ಖಾಸಗಿ ಬಸ್ ಮಾಲೀಕರು ಸಹ ಬಂದ್ ಗೆ ಬೆಂಬಲ ನೀಡಿದ್ದಾರೆ. ಇದರಿಂದ ಖಾಸಗಿ ಬಸ್ ನಿಲ್ದಾಣ, ನಗರಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಇನ್ನು ಇದನ್ನೇ ಬಂಡವಾಳ ಮಾಡಿಕೊಂಡಿರುವ ಆಟೋ ಚಾಲಕರು ಜನರಿಂದ ದುಪ್ಪಟ್ಟು ವಸೂಲಿ ಮಾಡುತ್ತಿರುವುದು ಕಂಡುಬರುತ್ತಿದೆ.


ವಿವಿಧ ಸಂಘಟನೆಗಳ ಬೆಂಬಲ‌
ನಗರದ ಜಯದೇವವೃತ್ತದಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ತಾಂಡರಕ್ಷಣಾ ವೇದಿಕೆ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಒತ್ತಾಯಗೊಳಿಸಿದರು. ಇನ್ನು ಸಿಪಿಐ, ಸಿಪಿಐಎಂ, ಎಸ್ ಯು ಸಿಐ ಕಾರ್ಯಕರ್ತರು ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಪರ ಸಂಘಟನೆಯಾದ ವಿಶ್ವಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ, ಗಾಂಧಿವೃತ್ತದಲ್ಲಿ ಕಟ್ಟಿಗೆ ಹಾಗೂ ಪೇಪರ್ ಗಳಿಂದ ಓಲೆ ಹಚ್ಚಿ ಟೀ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಲ್ಲದೆ ಸಿಲಿಂಡರ್ ಹಾಗೂ ಖಾಲಿ ಕ್ಯಾನ್ ಗಳನ್ನು ಪ್ರದರ್ಶಿಸಿದರು ನಂತರ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ರಾಜ್ಯಾಧ್ಯಕ್ಷ ಟಾರ್ಗೇಟ್ ಅಸ್ಲಂ ನೇತೃತ್ವದಲ್ಲಿ ಅಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಹಾಗೂ ಕಾರ್ಯಕರ್ತರು ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡಿ ತೈಲ ಬೆಲೆ ಏರಿಕೆ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆಯ ಮಹಾನಗರ ಪಾಲಿಕೆಯಿಂದ ಬಸ್ ನಿಲ್ದಾಣದವರೆಗೂಚಕ್ಕಡಿ ಗಾಡಿಯಲ್ಲಿ ಪ್ರಯಾಣ ಮಾಡಿದರು. ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೇತೃತ್ವದಲ್ಲಿಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಸರ್ಕಾರದ ಭೂತ ದಹನ ನಡೆಸಿ ಎತ್ತಿನ ಗಾಡಿಯ ಮೂಲಕ ಉಪವಿಭಾಗಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ಮೂಲಕ ತೆರಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಪದೇ ಪದೇ ತೈಲ ದರ ಏರಿಕೆ ಮಾಡಿರುವುದರಿಂದ ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಈ ಕೂಡಲೇ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ಇಲ್ಲದಿದ್ದರೇ ಜನತೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.


ಎಲ್ಲಾ ಬಂದ್ ಮಯ
ನಗರದೆಲ್ಲೆಡೆ ಬಂದ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ ಕಾಲೇಜುಗಳಿಗೆ ನಿನ್ನೆಯೇ ರಜೆ ಘೋಷಿಸಲಾಗಿದೆ. ಉಳಿದಂತೆ ಚಿತ್ರಮಂದಿರಗಳು, ಹೋಟೆಲ್ ಗಳು, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ. ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿರುವ ದೃಶ್ಯ ಕಂಡುಬರುತ್ತಿದೆ. ಉಳಿದಂತೆ ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ದಾವಣಗೆರೆಯಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ.

ಪ್ರತಿಭಟನೆ ಓಕೆ, ವಾಹನಗಳೇಕೆ….?
ತೈಲ ಬೆಲೆ ಏರಿಕೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ನಡೆಸಿದ ವಿವಿಧ ಸಂಘಟನೆಗಳು ಹಾಗೂ ಪಕ್ಷಗಳ ಕಾರ್ಯಕರ್ತರು ಬಂಕ್ ಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ನಗರದಲ್ಲೆಡೆ ವಾಹನಗಳಲ್ಲಿ ಸಂಚರಿಸಿ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದರು ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಕಂಡುಬಂದಿತು. ಪ್ರತಿಭಟನೆ ನಡೆಸುತ್ತಿರುವುದು, ಬಂದ್ ಮಾಡುತ್ತಿರುವುದು ಓಕೆ, ಆದರೆ ತೈಲ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡು ಬಂದ್ ನಡೆಸುವಂತೆ ಹೇಳುತ್ತಿರುವುದು ಎಷ್ಟು ಸರಿ ಎಂಬ ಮಾತುಗಳು ಸಾರ್ವಜನಿಕರಲ್ಲಿ ಅಲ್ಲಲ್ಲಿ ಕೇಳಿ ಬಂದಿತು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *