ರಾಜ್ಯದ ಆಡಳಿತದಲ್ಲಿ ನೂರಕ್ಕೆ ನೂರರಷ್ಟು ಕನ್ನಡ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ

ದಾವಣಗೆರೆ;ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ರಾಜ್ಯದ ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಕಡ್ಡಾಯವಾಗಿ ನೂರಕ್ಕೆ ನೂರರಷ್ಟು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ ಎಂದು ಸಣ್ಣ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಆರ್.ಶ್ರೀನಿವಾಸ್ ಹೇಳಿದರು.ಜಿಲ್ಲಾಡಳಿತ ವತಿಯಿಂದ ಇಂದು ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ, 63 ನೇ ಕನ್ನಡ ರಾಜ್ಯೋತ್ಸವದ ಶುಭ ಕೋರಿ, ಕನ್ನಡ ರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿದರು.


ಕನ್ನಡ ಅನುಷ್ಟಾನದ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಕಡತಗಳಲ್ಲಿನ ಟಿಪ್ಪಣಿಗಳು ಕನ್ನಡದಲ್ಲಿ ಸಲ್ಲಿಸುವಂತೆ ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಕಟ್ಟುನಿಟ್ಟಾಗಿ ನಿರ್ದೇಶನ ನೀಡಲಾಗಿದೆ.ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಮಕ್ಕಳು ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತೆ ಸರ್ಕಾರ ವಿಧೇಯಕವನ್ನು ತಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಮಕ್ಕಳ ಕಲಿಕೆಗೆ ಮಾತೃ ಭಾಷೆಯೇ ಅತ್ಯುತ್ತಮ ಮಾಧ್ಯಮ ಎಂಬುದು ಸಂಶಯಾತೀತವಾಗಿ ಸಾಬೀತಾಗಿರುವ ವಿಚಾರ. ಈ ವಿಚಾರವನ್ನು ಆಡಳಿತಗಾರರು ಮನವರಿಕೆ ಮಾಡಿಕೊಳ್ಳದೇ ಇರುವುದರಿಂದ ರಾಜ್ಯದಲ್ಲಿ ಕನ್ನಡ ಶಾಲೆಗಳು ಸೊರಗುತ್ತಿವೆ. ಕನ್ನಡ ಶಾಲೆಗಳನ್ನು ಬಲಪಡಿಸಿದಂತೆಲ್ಲಾ ಅಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಎಂದರು.


ಉತ್ತಮ ಶಿಕ್ಷಣ ಸಹಜವಾಗಿಯೇ ಸಮಾಜದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಕನ್ನಡ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ನಿಲುವು ಕೈಗೊಂಡಿದೆ. ಅಲ್ಲದೇ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಆಂಗ್ಲಭಾಷೆಯನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತಿದೆ ಎಂದರು.ಒಂದು ಭಾಷೆಯಾಗಿ ಆಂಗ್ಲಭಾಷೆ ಖಂಡಿತ ಬೇಕು. ಆದರೆ ಮಾಧ್ಯಮವಾಗಿ ಯಾಕೆ ಬೇಕು? ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಮುಂದುವರೆದ ಫ್ರಾನ್ಸ್, ಜರ್ಮನಿ ಹಾಗೂ ಜಪಾನ್ ದೇಶದ ಜನರಿಗೆ ಇಂಗ್ಲಿಷ್ ಬರುವುದಿಲ್ಲ. ಆದರೆ ಇಂಗ್ಲಿಷ್ ಭಾಷೆಯ ತಂತ್ರಜ್ಞಾನ ಸಂಬಂಧಿ ಪಾರಿಭಾಷಿಕತೆಯನ್ನು ತಮ್ಮ ಭಾಷೆಗೆ ಒಗ್ಗಿಸಿಕೊಂಡು ವಿಶ್ವವೇ ಬೆರಗಾಗುವಷ್ಟು ಸಾಧಿಸಿ ತೋರಿಸಿದ್ದಾರೆ.


ಜಾಗತಿಕ ಹಾಗೂ ಮುಕ್ತ ಮಾರುಕಟ್ಟೆಯ ಕಾಲಘಟ್ಟದಲ್ಲಿರುವ ಈ ಹೊತ್ತಿನಲ್ಲಿ ವ್ಯಾವಹಾರಿಕವಾಗಿ ಕನ್ನಡ ಬಳಕೆಯನ್ನು ಎಲ್ಲ ಆಧುನಿಕ ಮಾಧ್ಯಮದಲ್ಲೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕಾರ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಜಾಗತೀರಣ ನೆಪದಲ್ಲಿ ಕನ್ನಡ ನೆಲದೊಳಗೆ ನೆಲೆಸಿರುವ ಬಹುರಾಷ್ಟ್ರೀಯ ಕಂಪೆನಿಗಳು ಕನ್ನಡ ನೆಲ, ಜಲ, ಸಾರಿಗೆ, ವಿದ್ಯುತ್, ಮಾರುಕಟ್ಟೆ ವ್ಯವಸ್ಥೆಯನ್ನು ಬಳಸಿಕೊಂಡು ಉದ್ಯೋಗಾವಕಾಶ ಒದಗಿಸುವಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರವಾಗಿದ್ದು, ರಾಜ್ಯದಲ್ಲಿ ಖಾಸಗಿ ವಲಯದಲ್ಲಿ ಆದ್ಯತೆ ಮೇಲೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯುವಂತಾಗಲು ನಮ್ಮ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದರು.


ಕನ್ನಡ ರಾಜ್ಯ ಉದಯವಾಗಿ ಆರು ದಶಕಗಳು ಸಂದಿದ್ದು, ಈ ಸುದೀರ್ಘ ಅವಧಿಯಲ್ಲಿ ಕರ್ನಾಟಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ ಹಾಗೂ ಕನ್ನಡದ ಸಾಂಸ್ಕøತಿಕ ಪರಂಪರೆ ಉಜ್ವಲವಾದದ್ದು. ಎಂಟು ಜ್ಞಾನಪೀಠ ಪಡೆದ ಭಾರತೀಯ ಭಾಷೆಯಲ್ಲಿ ಕನ್ನಡ ಅಗ್ರ ಪಂಕ್ತಿಯಲ್ಲಿರುವುದು ಹೆಗ್ಗಳಿಕೆಯ ವಿಷಯ. ಕನ್ನಡ ನಾಡು ನುಡಿಗಾಗಿ ದುಡಿದ ಎಲ್ಲಾ ಮಹನೀಯರಿಗೆ ನಮನಗಳು.ರಾಜ್ಯದ ಏಕೀಕರಣದ ನಂತರದ 63 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಉತ್ತಮ ಪ್ರಗತಿ ಸಾಧಿಸಿದೆ. ಬಹುಭಾಷಿಕರ, ಬಹು ಸಂಸ್ಕøತಿಯ ಜನರ ನೆಲೆಯಾಗಿ ರೂಪುಗೊಂಡಿದೆ. ಆದರೆ ಈ ನೆಲದ ಮೂಲಭಾಷೆಯಾಗಿರುವ ಕನ್ನಡವನ್ನು ಬಲಪಡಿಸುವ ಕೆಲಸ ಆಗಬೇಕಿದೆ.


ಈ ನಿಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪುರವರ ಕವಿವಾಣಿಯಂತೆ ಸತ್ತಂತಿಹರನ್ನು ಬಡಿದೆಚ್ಚರಿಸಿ, ಕಚ್ಚಾಡುವವರನ್ನು ಕೂಡಿಸಿ ಒಲಿಸಿ, ಒಟ್ಟಿಗೆ ಬಾಳುವ ಹಾದಿಯಲ್ಲಿ ಕನ್ನಡದ ಮನಸ್ಸುಗಳನ್ನು ಕಟ್ಟುತ್ತಾ, ಕನ್ನಡದ ಡಿಂಡಿಮವನ್ನು ಸಾರ್ಥಕ ಹಾದಿಯಲ್ಲಿ ಬಾರಿಸೋಣ. ಕನ್ನಡ ನಮ್ಮ ವರ್ತಮಾನದ ಅಗತ್ಯವನ್ನಾಗಿಸಿ ಕನ್ನಡ ಅನ್ನ ಕೊಡುವ ಭಾಷೆಯನ್ನಾಗಿಸಲು ಶಕ್ತಿ ಮೀರಿ ಶ್ರಮಿಸೋಣವೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಆಯ್ದ 15 ಜನ ಸಾಧಕರಿಗೆ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.


ಮೆರವಣಿಗೆಯಲ್ಲಿ ಕಹಳೆವಾದನ, ಜಗ್ಗಲಗೆ, ಹಲಗೆವಾದನ, ಮೈಸೂರು ನಗಾರಿ, ಗೊಂಬೆಕುಣಿತ, ವೀರಗಾಸೆ ಕಲಾತಂಡಗಳು ಹಾಗೂ ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಆಯುಷ್ ಇಲಾಖೆ, ಕೆಎಸ್‍ಆರ್‍ಟಿಸಿ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಶಾಲೆಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಪಟ್ಟ ಜಾಗೃತಿ ಮೂಡಿಸುವ ಸ್ತಬ್ದಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿದರು. ಆರೋಗ್ಯ ಇಲಾಖೆ, ಕೆಎಸ್‍ಆರ್‍ಟಿಸಿ ಮತ್ತು ಶ್ರೀಮತಿ ಗುರುಬಸಮ್ಮ ವಿ.ಚಿಗಟೇರಿ ಶಾಲೆ ಸ್ತಬ್ದಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದರು.


2018 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಗಳಿಸಿದ ಹೊನ್ನಾಳಿ ತಾಲ್ಲೂಕಿನ ಸೌಮ್ಯ, ಜಗಳೂರು ತಾಲ್ಲೂಕಿನ ಸ್ಪಂದನ, ಸಾಸ್ವೆಹಳ್ಳಿಯ ದಿವ್ಯಾ ಹಾಗೂ ಸಂತೆಬೆನ್ನೂರಿನ ರುದ್ರೇಶ್ ಇವರಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.
ಪಥ ಸಂಚಲನ: ಡಿಎಆರ್ ನ ಆರ್‍ಪಿಐ ಎಸ್.ಎನ್.ಕಿರಣ್‍ಕುಮಾರ್ ಇವರ ನಾಯಕತ್ವದಲ್ಲಿ ಪಥ ಸಂಚಲನವು ಶಿಸ್ತು ಮತ್ತು ಆಕರ್ಷಕವಾಗಿ ಮೂಡಿಬಂದಿದ್ದು ಒಟ್ಟು 17 ತಂಡಗಳು ಪಾಲ್ಗೊಂಡಿದ್ದವು. ಅಬಕಾರಿದಳ ಪ್ರಥಮ, ಗೃಹರಕ್ಷಕ ದಳಕ್ಕೆ ದ್ವಿತೀಯ ಬಹುಮಾನ ಪಡೆದವು. ಎನ್‍ಸಿಸಿ ವಿಭಾಗದಲ್ಲಿ ಸೇಂಟ್ ಪಾಲ್ಸ್ ಪ್ರೌಢಶಾಲೆ ಪ್ರಥಮ, ಎಸ್‍ಟಿಜೆ ಸ್ಕೂಲ್ ದ್ವಿತೀಯ ಮತ್ತು ಸರ್ಕಾರಿ ಪ್ರೌಢಶಾಲೆ ತೃತೀಯ ಬಹುಮಾನ ಪಡೆದುಕೊಂಡವು.
ತರಳಬಾಳು ಪ್ರೌಢಶಾಲೆಯ ಹಾಗೂ ಗೋಲ್ಡನ್ ಪಬ್ಲಿಕ್ ಶಾಲೆಯ ಮಕ್ಕಳು ಕನ್ನಡ ನೆಲ-ಭಾಷೆಯ ಕುರಿತಾದ ನೃತ್ಯ ರೂಪಕ ಪ್ರದರ್ಶಿಸಿದರು. ರಕ್ತದಾನಿ ಮಹಡಿ ಶಿವಕುಮಾರ್ ರಕ್ತದಾನದ ಮಹತ್ವ ಸಾರುವ ಕುರಿತು ಮೈಗೆ ಬಿಳಿ ಮತ್ತು ಕೆಂಪು ಬಣ್ಣ ಹಚ್ಚಿಕೊಂಡು ಎಲ್ಲರ ಗಮನ ಸೆಳೆದರು.


ಕಾರ್ಯಕ್ರಮದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಅಧ್ಯಕ್ಷೆ ಜಯಶೀಲಾ ಕೆ.ಆರ್, ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ಜಿ ಪಂ ಸಿಇಓ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *