ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟ

ದಾವಣಗೆರೆ; ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿದಂತ ಮಹಾನ್ ವ್ಯಕ್ತಿ ಸಿ.ಕೆ.ಜಾಫರ್ ಶರೀಫ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರುಗಳಾದ ಅಂಬರೀಶ್ ಹಾಗೂ ಸಿ.ಕೆ. ಜಾಫರ್ ಷರೀಫ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸಚಿವ, ಬಿಜೆಪಿ ಅನಂತಕುಮಾರ್ ನಿಧನರಾದಾಗ ಕಾಂಗ್ರೆಸ್ ತನ್ನೆಲ್ಲಾ ಕಾರ್ಯಕ್ರಮಗಳನ್ನು ರದ್ದುಮಾಡಿ, ಶ್ರದ್ಧಾಂಜಲಿ ಸಲ್ಲಿಸಿತ್ತು. ಅಲ್ಲದೆ ಈ ಹಿಂದೆ ಬರಗಾಲ ಬಂದಾಗಲೆಲ್ಲಾ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‍ಎಸ್ ಮಲ್ಲಿಕಾರ್ಜುನ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಬಿಜೆಪಿಗರು ರಾಜ್ಯದ ಇಬ್ಬರು ಜನನಾಯಕರು ನಿಧನರಾದಾಗಲೂ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಜೆಪಿಗೆ ಶೋಭೆಯಲ್ಲ. ಹಣ, ಅಧಿಕಾರಕ್ಕಾಗಿ ಮಾತ್ರ ಉದಯಿಸಿರುವ ಬಿಜೆಪಿಗೆ ಸಂಸ್ಕೃತಿಯೇ ಇಲ್ಲ ಎಂದು ಅವರು ಕಿಡಿಕಾರಿದರು.

ಜಾಫರ್ ಷರೀಪ್ ಹಾಗೂ ನಟ, ರಾಜಕಾರಣಿ ಅಂಬರೀಷ್ ಮೇರು ವ್ಯಕ್ತಿತ್ವವುಳ್ಳ ಸಜ್ಜನ ರಾಜಕಾರಣಿಗಳು. ಇವರು ಜಾತಿ, ಮತ, ಪಂಥ ಮೀರಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ದು ಸಮಾನತೆ ಸಾರಿದವರು. ಇಂತಹ ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದು, ಅವರು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು. ಜಿಪಂ ಸದಸ್ಯ ಬಸವಂತಪ್ಪ ಮಾತನಾಡಿ, ಅಲ್ಪಸಂಖ್ಯಾತರಾದರೂ ಜಾಫರ್ ಷರೀಫ್ ಅವರು ಎಲ್ಲ ಧರ್ಮಿಯರೊಂದಿಗೆ ಉತ್ತಮ ಒಡನಾಡ ಹೊಂದಿದ್ದರು. ರೇಲ್ವೆ ಖಾತೆ ಸಚಿವರಾಗಿ ನೂರಾರು ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅಲ್ಲದೆ, ಮತ್ತೊಬ್ಬ ಅಂಬರೀಷ್ ಜನಿಸಬಹುದು.

ಆದರೆ, ಅವರಂತಹ ವ್ಯಕ್ತಿತ್ವವುಳ್ಳ ಮತ್ತೊಬ್ಬ ಅಂಬರೀಷ್ ಹುಟ್ಟಲಾರರು ಎಂದು ಬಣ್ಣಿಸಿದರು.ಎಸ್‍ಸಿ ಘಟಕದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಮಾತನಾಡಿ, ಹಿಂದೊಮ್ಮೆ ಅರಸುರವರು, ಡಿ.ಬಿ. ಚಂದ್ರೇಗೌಡರು ಮತ್ತಿತರರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಕಟ್ಟಲೆತ್ನಿಸಿದಾಗ ಚಂದ್ರೇಗೌಡರು ಷರೀಪ್ ಅವರಿಗೆ ಸಿಎಂ ಹುದ್ದೆಯ ಆಮಿಷ ತೋರಿ ಕಾಂಗ್ರೆಸ್‍ನಿಂದ ಹೊರಬರುವಂತೆ ಕೇಳಿಕೊಂಡರು. ಆದರೆ, ಷರೀಪ್ ಅವರು ನನಗೆ ಪಕ್ಷ ನಿಷ್ಠೆಯೇ ಮುಖ್ಯ. ಹಾಗಾಗಿ, ನಾನು ಇಂದಿರಾಗಾಂಧಿಯವರೊಂದಿಗೆ ಕಾಂಗ್ರೆಸ್‍ನಲ್ಲೇ ಇರುವೆ ಎಂದು ಖಾರವಾಗಿ ಬಂದಂತಹ ಸಿಎಂ ಹುದ್ದೆ ಅವಕಾಶವನ್ನು ನಿರಾಕರಿಸಿದಂತ ದಿಟ್ಟನಡೆಯ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿಕೊಂಡರು.ಶ್ರದ್ಧಾಂಜಲಿ ಸಭೆಯಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಪಂ ಸದಸ್ಯ ಓಬಳೇಶಪ್ಪ, ಪಾಲಿಕೆ ಸದಸ್ಯ ಹಾಲೇಶ್, ಜೆ.ಬಿ. ಲಿಂಗರಾಜ್, ಅಯೂಬ್ ಪೈಲ್ವಾನ್, ಮುಜಾಯಿದ್, ನಲ್ಕುಂದ ಹಾಲೇಶ್, ಯತಿರಾಜ್ ಮಠದ್, ದಾದಾಪೀರ್, ಆರೋಗ್ಯಸ್ವಾಮಿ, ಗಣೇಶ್ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *