ಮಾನವನ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಬಾರದು

ದಾವಣಗೆರೆ; ಮಾನವನ ಹಕ್ಕುಗಳನ್ನು ಪ್ರತಿಪಾದಿಸುವ ಮೂಲಕ ಸಂತರಾದ ಪೈಗಂಬರ್‍ರವರು ಮಾನವೀಯ ಮೌಲ್ಯಗಳನ್ನು ತೋರಿಸಿಕೊಟ್ಟಿದ್ದಾರೆ. ಅವರ ನಡೆ ನುಡಿಗಳು ನಮಗೆ ದಾರಿದೀಪವಾಗಲಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯಾದಂತಹ ಕೆಂಗಬಾಲಯ್ಯನವರು ಪ್ರತಿಪಾದಿಸಿದರು.

ಅವರು ಅಲ್‍ಮೋಮಿನಿನ್ ಬೈತುಲ್‍ಮಾಲ್ ಕಮಿಟಿ, ಹಾಗು ಮಾನವನ ಹಕ್ಕುಗಳ ವೇದಿಕೆಯ ಆಶ್ರಯದಲ್ಲಿ ಪ್ರವಾದಿ ಹಜರತ್ ಮಹಮದ್ ಪೈಗಂಬರ್‍ರವರ ಜನ್ಮ ದಿನಾಚರಣೆಯ ಅಂಗವಾಗಿ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಅಂಧ ಹೆಣ್ಣುಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು ಮತ್ತು ಸಿಹಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಸಂವಿಧಾನವು ಸರ್ವ ಜನರಿಗೆ ಒಳಿತುಮಾಡುವ ಸಹಬಾಳ್ವೆಯನ್ನು ಪ್ರತಿಪಾದಿಸುವ ಸಮಾನತೆಯನ್ನು ತರುವ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದರಂತೆ ಮಹಮದ್ ಪೈಗಂಬರ್‍ರವರು ಆಗಿನ ಕಾಲದಲ್ಲಿಯೇ ಮಾನವೀಯ ಮೌಲ್ಯಗಳಿಗೆ ಚೌಕಟ್ಟನ್ನು ನಿರ್ಮಿಸಿ ಬದುಕುವ ಕಲೆಯನ್ನು ತೋರಿಸಿಕೊಟ್ಟು ಸರ್ವರ ಅಭ್ಯುದಯವನ್ನು ಬಯಸಿದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾವೆಲ್ಲರು ಸಾಗೋಣ ಎಂದರು.


ಅಲ್‍ಮೋಮಿನಿನ್ ಬೈತುಲ್‍ಮಾಲ್ ಕಮಿಟಿಯ ಕಾರ್ಯದರ್ಶಿ ನಜೀರ್ ಅಹಮದ್, ಮಹಮದ್ ಪೈಗಂಬರ್‍ರವರು ಇಡೀ ಮಾನವ ಕುಲದ ಶರಣರಾಗಿದ್ದಾರೆ. ಮಾನವ ಕುಲದ ಹಕ್ಕುಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಪಂಚಕ್ಕೆ ಬೆಳಕನ್ನು ತೋರಿಸಿದ್ದಾರೆ. ಆಗಿನ ಕಾಲದ ಶೋಷಿತ ಹೆಣ್ಣು ಮಕ್ಕಳ ಧ್ವನಿಯಾಗಿ ನಿಂತು, ಅಜ್ಞಾನದಿಂದ ನರಳುತ್ತಿದ್ದವರಿಗೆ ಜ್ಞಾನದ ಬೆಳಕನ್ನು ನೀಡಿ ಮಹಾನ್ ಸಂತರೆನಿಕೊಂಡಿದ್ದಾರೆ ಎಂದರು.
ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಎನ್.ಹೆಚ್. ಅರುಣ್‍ಕುಮಾರ್, ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಮಾನವ ಧರ್ಮವಾಗಿದ್ದು, ದೀನದಲಿತರು, ಶೋಷಿತರಿಗೆ ಸಹಾಯವಾಗುವ ಮೂಲಕ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಆಶಿಸಿದರು.
ಪತ್ರಕರ್ತ ಎ. ಫಕೃದ್ದೀನ್ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು. ಪ್ರಾರ್ಥನೆಯನ್ನು ಬೇಬಿ ಆಯುಷ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಡಾ. ಕೆ.ಕೆ. ಪ್ರಕಾಶ್, ಕೆ.ಸಿ. ಮಹಮದ್, ಹಸನ್, ಇಸ್ಮಾಯಿಲ್, ಫಾರುಕ್, ಮಹಮದ್ ನಿಹಾಲ್, ಶಾಹೀದ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *