ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಕಲ್ಪ

ದಾವಣಗೆರೆ; ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ಸಭೆಯನ್ನು ಡಿಸೆಂಬರ್ 8 ರಂದು ಸಂಜೆ 4 ಕ್ಕೆ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ನ ಪ್ರಾಂತ್ಯ ಕಾರ್ಯದರ್ಶಿ ಬಸವರಾಜಜೀ ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, 1951 ರಿಂದ ಇಲ್ಲಿಯವರೆಗೂ ನ್ಯಾಯಾಲಯದ ತೀರ್ಪಿಗಾಗಿ ಹಿಂದುಗಳು ನಿರೀಕ್ಷೆ ಮಾಡುತ್ತಿದ್ದೇವೆ. ಆದರೆ ಇದೀಗ ಕಾಯುವ ಸ್ಥಿತಿ ಮುಗಿದಿದ್ದು, ಕೇಂದ್ರ ಸರ್ಕಾರ ಕೂಡಲೇ ಬರುವ ಅಧಿವೇಶನದಲ್ಲಿ ಸುಗ್ರಿವಾಜ್ಞೆ ಜಾರಿಗೊಳಿಸಿ ಮಂದಿರ ನಿರ್ಮಿಸಲು ಹಿಂದುಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಭೆ ಹಮ್ಮಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶದ 548 ಸಂಸದರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಲಾಗುವುದು.

ಇಲ್ಲಿಯವರೆಗೂ ರಾಮಮಂದಿರ ಕಟ್ಟುವ ವಿಚಾರದಲ್ಲಿ ಹಿಂದುಗಳ ಭಾವನೆಗೆ ಹಾನಿ ಉಂಟು ಮಾಡಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮಜನ್ಮ ಭೂಮಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆ ಜನಾಗ್ರಹ ಸಭೆ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಮಂಗಳೂರು, ಗದಗ, ಹುಬ್ಬಳ್ಳಿಯಲ್ಲಿ ಸಭೆ ನಡೆದಿದೆ. ದಾವಣಗೆರೆಯಲ್ಲಿ ಡಿ. 8 ರಂದು ಸಭೆ ನಡೆಯಲಿದೆ. ಈ ಸಭೆಗೆ ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದಸ್ವಾಮೀಜಿ, ಜಡೇಸಿದ್ದೇಶ್ವರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಹಿರೇಹಡಗಲಿಯ ಹಾಲಪ್ಪ ಸ್ವಾಮೀಜಿ,ವೇಮಾನಂದಪುರಿಸ್ವಾಮೀಜಿ, ಮುಷ್ಟೂರು ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ.

ಮಂಗಳೂರು ವಿಶ್ವ ಹಿಂದು ಪರಿಷದ್ ನ ವಿಭಾಗ ಕಾರ್ಯದರ್ಶಿ ಶರಣ್ ಆಗಮಿಸಲಿದ್ದಾರೆ. ಸಭೆಯಲ್ಲಿ ಜನ್ಮಭೂಮಿ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಅಡೆತಡೆಗಳನ್ನು ಸಂಸತ್ ನಲ್ಲಿ ಮಸೂದೆಯ ಮೂಲಕ ನಿವಾರಿಸಬೇಕು. ಹಿಂದು ಭಾವನೆಗಳನ್ನು ಕೆಣಕುವ ಪ್ರಸಂಗಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಜನಮನ್ನಣೆ ಗಳಿಸಿದ ಜನ್ಮಭೂಮಿ ರಾಮಮಂದಿರದ ನಕ್ಷೆಯಂತೆ ಸಂಗ್ರಹಿಸಿದ ಇಟ್ಟಿಗೆಗಳಿಂದಲೇ, ಕೆತ್ತಿದ ಕಲ್ಲುಗಳಿಂದಲೇ ಸಂತರ ನೇತೃತ್ವದಲ್ಲಿಯೇ ಮಂದಿರ ನಿರ್ಮಾಣವಾಗಬೇಕೆಂಬುದು ಸೇರಿದಂತೆ ವಿವಿಧ ವಿಷಯಗಳು ಕುರಿತು ಚರ್ಚೆ ನಡೆಸಲಾಗುವುದು. ಸಭೆಯ ನಂತರ ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದೇಶ್ವರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ದೇವರಮನಿ ಶಿವಕುಮಾರ್, ಷಡಾಕ್ಷರಪ್ಪ, ಕೆ.ಬಿ.ಶಂಕರನಾರಾಯಣ, ರವೀಂದ್ರ, ಪ್ರಹ್ಲಾದ್ ತೇಲ್ಕರ್, ಯೋಗೀಶ್ ಭಟ್, ರಾಜು, ಬಸವರಾಜ್ ಗುಬ್ಬಿ ಇದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *